Wednesday, April 28, 2010

ಜೀವನದ ಅಮೂಲ್ಯ ಪಾಠ - ಸಮತೋಲನ

ನಾನು ಈ ಕವಿತೆ ಬರೆದು ಸುಮಾರು ೫ (5) ವರುಷ ಕಳೆದಿದೆ! ನಿರಾಶಾವಾದಿಗಳಿಗೆ ಮತ್ತು ದೇವದಾಸರಿಗೆ ಒಬ್ಬ ಭಗ್ನ ಪ್ರೇಮಿಯ ಸಂದೇಶ!

*******************************************

ಏಕೋ ಮನವು ಇಂದು ಚಂಚಲಗೊಂಡಿದೆ
ಏನೋ ಬರೆಯಲು ಕಾತುರದಿಂದಿದೆ

ಮರೆಯಲು ಯತ್ನಿಸುತ್ತಿರುವೆ ನಿನ್ನಯ ರೂಪ
ಮಾಡಿಕೊಂಡೆ ಪರಮಾತ್ಮನಲ್ಲಿ ನಾನಾ ಬಿನ್ನಪ

ನೆನಪಿನಂಗಳದಿ ನಲಿಯುವುದು ನಿನ್ನಯ ಕಿರುನಗೆ
ಆ ಸುಂದರ ವಾದನ ಆ ಚೆಲುವಾದ ಬಗೆ

ಮಣ್ಣಾಯಿತು ನಾ ಕಟ್ಟಿದ ಕನಸಿನ ಮಂದಿರ
ಒಡೆಯಿತು ನಾ ನಿರ್ಮಿಸಿದ ಗಾಳಿ ಗೋಪುರ

ಅನಿಸಿತು ನನಗೆ ಇದೆಂತಹ ವಿಪರ್ಯಾಸ
ಹೀಗೂ ಇರುವುದೇ ವಿಧಿಯ ಪರಿಹಾಸ

ಕಲಿತೆ ಅವಳಿಂದ ಒಂದು ಅಮೂಲ್ಯ ಪಾಠ
ಬದುಕಲ್ಲ ಹಗುರವಾಗಿ ತಗೆದುಕೊಳ್ಳುವ ಆಟ

ಸಮತೋಲನದ ಬದುಕೇ ಸುಖ ಬಾಳಿನ ರಹಸ್ಯ
ಇರಬೇಕು ಜೀವನದಲಿ ಸದಾ ಸಾಮರಸ್ಯ!


- ಕಠಾರಿವೀರ

*******************************************

ಜೀವನದಲ್ಲಿ ಬಹಳಷ್ಟು ಜನ ಈ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಕೆಲವರು ಈ ಆಘಾತವನ್ನು ಸಹಿಸಿಕೊಂಡು, ಅದರಿಂದ ಹೊರಬಂದು, ಪ್ರೇಯಸಿ (ಅಥವಾ ಪ್ರೇಮಿ) ಮತ್ತು ಪ್ರೀತಿಯಷ್ಟೇ ಬದುಕಲ್ಲ, ಇನ್ನು ಬಹಳಷ್ಟಿದೆ ಅಂತ ಅರಿತು ತಮ್ಮ ಜೀವನವನ್ನು ಸಹಜವಾಗಿ ಮತ್ತು ಸುಂದರವಾಗಿ ರೂಪಿಸಿಕೊಳ್ಳುತ್ತಾರೆ. ಆದರೆ, ಇನ್ನೂ ಕೆಲವರಿಗೆ ಈ ಆಘಾತದಿಂದ ಮನಸ್ಸಿನ ಸಮತೋಲನ ಹಾಗು ನೆಮ್ಮದಿಗಳನ್ನು ಕಳೆದುಕೊಂಡು, ದೇವದಾಸ್ ನನ್ನು ತಮ್ಮ ನಿದರ್ಶನವಾಗಿಟ್ಟುಕೊಂಡು ತಮ್ಮ ಬಾಳು ಹಾಗು ತಮ್ಮ ಜೊತೆಯವರ ಬಾಳು ಕಹಿಯಾಗಿ ಮಾಡಿಕೊಳ್ಳುತ್ತಾರೆ. ಅವರು ಹಾಗೆ ಮಾಡಿಕೊಳ್ಳದೆ ಸುಖ ದುಃಖಗಳನ್ನೂ ಆದಷ್ಟು ಸಮವಾಗಿ ತೆಗೆದುಕೊಂಡರೆ ಜೀವನ ಎಷ್ಟು ಸುಖಮಯವಲ್ಲವೇ?

Wednesday, February 03, 2010

ನಗು ಎಂದಿದೆ ಮಂಜಿನ ಬಿಂದು - ಸಾಹಿತ್ಯ

"ನಗು ಎಂದಿದೆ ಮಂಜಿನ ಬಿಂದು" - ಎಷ್ಟು ಸೊಗಸಾದ, ಸುಂದರವಾದ ಹಾಡು ಅರ್ಥಪೂರ್ಣ ಸಾಲುಗಳು! ಆರ್ ಎನ್ ಜಯಗೊಪಾಲ್ ರವರ ಸಾಹಿತ್ಯದ ಪರಮಾವಧಿಯೇ ಇದು ಅನಿಸುತ್ತದೆ! ಎಸ್ ಜಾನಕಿಯವರ ಕಂಠದ ಬಗ್ಗೆ ಹೇಳುವುದೇ ಬೇಡ! ಇಳಯರಾಜರ ಸಂಗೀತವು ಮಾಧುರ್ಯಪೂರ್ಣ! ಎಲ್ಲ ಸಂಗತಿಗಳು ಕೂಡಿ ಬಂದಾಗ ಹೊರಹೊಮ್ಮುವ ಅದ್ಭುತಕ್ಕೆ ಈ ಹಾಡೇ ಉತ್ತಮ ನಿದರ್ಶನ.

ಈ ಹಾಡಿನ ಸಾಹಿತ್ಯಕ್ಕಾಗಿ ನಾನು ಬಹಳ ದಿನಗಳಿಂದ ಹುಡುಕುತ್ತಿದೆ. ಈ ಅನ್ವೇಷಣೆ ಇವತ್ತು ಫಲಪ್ರದವಾಯಿತು, ಅನುರವರ ಕೃಪೆಯಿಂದ! ಅನು ಅವರೇ, ನಿಮಗೆ ನನ್ನ ಅನಂತ ಧನ್ಯವಾದಗಳು.

ಈ ಹಾಡಿನ ಸಾಹಿತ್ಯಕ್ಕೆ ಇಲ್ಲಿ ನೋಡಿ.

ಹಾಗೆ ಪಲ್ಲವಿ ಅನುಪಲ್ಲವಿ ಚಿತ್ರದ ಎಲ್ಲಾ ಹಾಡುಗಳ ಸಾಹಿತ್ಯಕ್ಕೆ ಈ ತಾಣ ವನ್ನು ನೋಡಿ.

ಈ ಹಾಡಿನ ಸಾಹಿತ್ಯಕ್ಕೆ ಹುಡುಕುವಾಗ ಅಕಸ್ಮಾತ್ತಾಗಿ ಆರ್ ಎನ್ ಜಯಗೊಪಾಲ್ ರವರ ಬ್ಲಾಗ್ ಸಿಕ್ಕಿತು! ಅವರ ಮಗನಾದ ರವಿ ಜಯಗೊಪಾಲ್ ರವರೆ ಈ ಬ್ಲಾಗ್ ನ ಸೂತ್ರಧಾರಿಗಳು! ಕೆಲವು ಅಪೂರ್ವ ಹಾಗು ಅಪರೂಪದ ವಿಷಯಗಳನ್ನು ತಿಳಿಸಿಕೊಡುವ ತಾಣ! ಅವರಿಗೂ ನನ್ನ ಕೃತಜ್ಞತೆಗಳು!

- ಕಠಾರಿವೀರ