Wednesday, April 28, 2010

ಜೀವನದ ಅಮೂಲ್ಯ ಪಾಠ - ಸಮತೋಲನ

ನಾನು ಈ ಕವಿತೆ ಬರೆದು ಸುಮಾರು ೫ (5) ವರುಷ ಕಳೆದಿದೆ! ನಿರಾಶಾವಾದಿಗಳಿಗೆ ಮತ್ತು ದೇವದಾಸರಿಗೆ ಒಬ್ಬ ಭಗ್ನ ಪ್ರೇಮಿಯ ಸಂದೇಶ!

*******************************************

ಏಕೋ ಮನವು ಇಂದು ಚಂಚಲಗೊಂಡಿದೆ
ಏನೋ ಬರೆಯಲು ಕಾತುರದಿಂದಿದೆ

ಮರೆಯಲು ಯತ್ನಿಸುತ್ತಿರುವೆ ನಿನ್ನಯ ರೂಪ
ಮಾಡಿಕೊಂಡೆ ಪರಮಾತ್ಮನಲ್ಲಿ ನಾನಾ ಬಿನ್ನಪ

ನೆನಪಿನಂಗಳದಿ ನಲಿಯುವುದು ನಿನ್ನಯ ಕಿರುನಗೆ
ಆ ಸುಂದರ ವಾದನ ಆ ಚೆಲುವಾದ ಬಗೆ

ಮಣ್ಣಾಯಿತು ನಾ ಕಟ್ಟಿದ ಕನಸಿನ ಮಂದಿರ
ಒಡೆಯಿತು ನಾ ನಿರ್ಮಿಸಿದ ಗಾಳಿ ಗೋಪುರ

ಅನಿಸಿತು ನನಗೆ ಇದೆಂತಹ ವಿಪರ್ಯಾಸ
ಹೀಗೂ ಇರುವುದೇ ವಿಧಿಯ ಪರಿಹಾಸ

ಕಲಿತೆ ಅವಳಿಂದ ಒಂದು ಅಮೂಲ್ಯ ಪಾಠ
ಬದುಕಲ್ಲ ಹಗುರವಾಗಿ ತಗೆದುಕೊಳ್ಳುವ ಆಟ

ಸಮತೋಲನದ ಬದುಕೇ ಸುಖ ಬಾಳಿನ ರಹಸ್ಯ
ಇರಬೇಕು ಜೀವನದಲಿ ಸದಾ ಸಾಮರಸ್ಯ!


- ಕಠಾರಿವೀರ

*******************************************

ಜೀವನದಲ್ಲಿ ಬಹಳಷ್ಟು ಜನ ಈ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಕೆಲವರು ಈ ಆಘಾತವನ್ನು ಸಹಿಸಿಕೊಂಡು, ಅದರಿಂದ ಹೊರಬಂದು, ಪ್ರೇಯಸಿ (ಅಥವಾ ಪ್ರೇಮಿ) ಮತ್ತು ಪ್ರೀತಿಯಷ್ಟೇ ಬದುಕಲ್ಲ, ಇನ್ನು ಬಹಳಷ್ಟಿದೆ ಅಂತ ಅರಿತು ತಮ್ಮ ಜೀವನವನ್ನು ಸಹಜವಾಗಿ ಮತ್ತು ಸುಂದರವಾಗಿ ರೂಪಿಸಿಕೊಳ್ಳುತ್ತಾರೆ. ಆದರೆ, ಇನ್ನೂ ಕೆಲವರಿಗೆ ಈ ಆಘಾತದಿಂದ ಮನಸ್ಸಿನ ಸಮತೋಲನ ಹಾಗು ನೆಮ್ಮದಿಗಳನ್ನು ಕಳೆದುಕೊಂಡು, ದೇವದಾಸ್ ನನ್ನು ತಮ್ಮ ನಿದರ್ಶನವಾಗಿಟ್ಟುಕೊಂಡು ತಮ್ಮ ಬಾಳು ಹಾಗು ತಮ್ಮ ಜೊತೆಯವರ ಬಾಳು ಕಹಿಯಾಗಿ ಮಾಡಿಕೊಳ್ಳುತ್ತಾರೆ. ಅವರು ಹಾಗೆ ಮಾಡಿಕೊಳ್ಳದೆ ಸುಖ ದುಃಖಗಳನ್ನೂ ಆದಷ್ಟು ಸಮವಾಗಿ ತೆಗೆದುಕೊಂಡರೆ ಜೀವನ ಎಷ್ಟು ಸುಖಮಯವಲ್ಲವೇ?