Wednesday, January 28, 2009

ನನಗೆ ಇಷ್ಟವಾದ ಭಾವಗೀತೆಗಳ ಸಾಲುಗಳು!

ಭಾವಗೀತೆಗಳು ಏಕೆ ಅಷ್ಟು ಪ್ರಚಲಿತ ಹಾಗು ಪ್ರಸಿದ್ಧ ಎಂದು ಯೋಚನೆ ಮಾಡಿದಾಗ, ಅದರ ಕೆಲವು ಮುಖ್ಯ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಅವೆನಪ್ಪ ಅಂದ್ರೆ: ಅದರ ಮಾಧುರ್ಯತೆ, ಅವುಗಳ ಸಾಹಿತ್ಯ, ಅವುಗಳ ಸಂಗೀತ ಮತ್ತು ಅವುಗಳಲ್ಲಿ ತುಂಬಿರುವ ಭಾವ! ಈ ಅಂಶಗಳಲ್ಲಿ ಯಾವುದಕ್ಕೆ ಪ್ರಾಶಸ್ತ್ಯ ಹೆಚ್ಚು ಯಾವುದಕ್ಕೆ ಕಮ್ಮಿ ಅಂತ ಹೇಳುವುದು ಕಷ್ಟಸಾಧ್ಯ.


ಆದರೆ, ನನಗೆ ಈ ಅಂಶಗಳಲ್ಲಿ ಯಾವುದು ಮುಖ್ಯ ಅಂತ ಕೇಳಿದರೆ, ನಾನು ಹೇಳುವುದು ಸಾಹಿತ್ಯ ಅಂತಲೇ. ಸಾಹಿತ್ಯದ ಅಡಿಪಾಯದ ಮೇಲೆ ಅಲ್ಲವೇ ಈ ಭಾವಗೀತೆಗಳು ತಮ್ಮ ಭವ್ಯವಾದ ಕಟ್ಟಡವನ್ನು ಕಟ್ಟಿರುವುದು.


ಕೆಲವು ಭಾವಗೀತೆಗಳಂತೂ ಕೇಳಿದ ತಕ್ಷಣವೇ ನಮ್ಮ ಮನಸನ್ನು ಕಲಿಕಿ ತಮ್ಮದೇ ಆದ ಛಾಪನ್ನು ಅವು ಬಿಟ್ಟು ಹೋಗುತ್ತವೆ! ಯಾವುದೋ ಒಂದು ಸಾಲು ನಮ್ಮ ಹೃದಯವೀಣೆಯನ್ನು ಮೀಟಿ ಅದೆಂತಹ ಅದ್ಭುತ ರಾಗವನ್ನು ಸೃಷ್ಟಿಸುತ್ತವೆಯೋ! ಈ ರೀತಿ ನನ್ನನ್ನು ಕಲುಕುವ ಕೆಲವು ಭಾವಗೀತಗಳ ಬಗ್ಗೆ ಬೇರೆಯಬೇಕೆಂಬ ಹಂಬಲ ಮತ್ತು ತವಕ.


೧. ಸಿ.ಅಶ್ವಥ್ ಅವರು ಹಾಡಿರುವ "ಮನಸೇ ನನ್ನ ಮನಸೇ" - ಈ ಭಾವಗೀತೆಯಂತು ಭಗ್ನ ಪ್ರೇಮಿಗಳಿಗೆ ಹೇಳಿ ಮಾಡಿಸಿರುವ ಹಾಗಿದೆ! ಬರೆದವರು ಯಾರು ಅಂತಸಹ ನಾನು ತಿಳಿಯೆ ಆದರೆ ಇದು ಮನ ಮುಟ್ಟುವ ತಟ್ಟುವ ಸರಳವಾದ ಗೀತ ಅಂತ ಮಾತ್ರ ಹೇಳಬಲ್ಲೆ! ಈ ಗೀತೆಯಲ್ಲಿ ನನಗೆ ಭಾಗಶಃ ಎಲ್ಲ ಸಾಲುಗಳು ಪ್ರಿಯವಾದುವೆ!


೨. ರತ್ನಮಾಲಾ ಪ್ರಕಾಶ್ ರವರು ಹಾಡಿರುವ " ಯಾವ ಮೋಹನ ಮುರಳಿ ಕರೆಯಿತೋ" - ಈ ಭಾವಗೀತೆಯನ್ನು ಬರೆದವರು ಶ್ರೀಯುತ ಗೋಪಾಲ ಕೃಷ್ಣ ಅಡಿಗರು. ಇದರಲ್ಲಿ ಬರುವ ಒಂದು ಸಾಲು ಹೀಗಿದೆ. ಈ ಸಾಲು ಬಹುಷಃ ಮಾನವನ ಪ್ರವೃತ್ತಿಯನ್ನು ಪ್ರತಿಬಿಂಬಿಸುವ ನಿಜಾಂಶವೇ! ಮನುಷ್ಯ ತನ್ನ ಬಳಿ ಅಷ್ಟೈಶ್ವರ್ಯಗಳೇ ಇರಲಿ, ತನ್ನಲ್ಲಿ ಏನು ಇಲ್ಲವೊ ಅದನ್ನು ಪದಯುವುದಕ್ಕೆ ಹಂಬಲಿಸುತ್ತಾನೆ! ಈ ನಿಜಾಂಶವನ್ನು ಬಹಳ ಸುಂದರ ಹಾಗು ಸರಳವಾಗಿ ಅಡಿಗರು ಹೇಳಿದ್ದಾರೆ.


"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ "

- ಕಠಾರಿವೀರ